ಗ್ರೀನ್ಲೆಂಡ್ -
ವಿಶ್ವದ ಅತ್ಯಂತ ದೊಡ್ಡ ದ್ವೀಪ; ಡೆನ್ಮಾರ್ಕಿಗೆ ಸೇರಿದೆ. ಬಹುತೇಕ ಉತ್ತರ ಆರ್ಕ್‍ಟಿಕ್ ವೃತ್ತದಲ್ಲಿದೆ. ಆರ್ಕ್‍ಟಿಕ್ ಸಾಗರ, ಗ್ರೀನ್ಲೆಂಡ್ ಸಮುದ್ರ, ಡೆನ್ಮಾರ್ಕ್ ಜಲಸಂಧಿ, ಅಟ್ಲಾಂಟಿಕ್ ಸಾಗರ, ಬಾಫಿನ್‍ಕೊಲ್ಲಿ, ಡೇವಿಸ್ ಜಲಸಂಧಿಗಳಿಂದ ಸುತ್ತುವರಿಯಲ್ಪಟ್ಟಿರುವ ಗ್ರೀನ್ಲೆಂಡ್ ಉ.ಅ. 590 46`-830 39` ಮತ್ತು ಪ.ರೇ. 110 39'-730 08' ನಡುವೆ ಇದೆ. ಉತ್ತರದ ತುದಿ ಮಾರಿಸ್ ಜೆಸ್ಸಪ್ ಭೂಶಿರ. ದಕ್ಷಿಣದ ಕೊನೆ ಫೇರ್‍ವೆಲ್ ಭೂಶಿರ. 440 ಮೈ. ದೂರದಲ್ಲಿದೆ. ವಿಸ್ತೀರ್ಣ 8.40.000ಚ.ಮೈ. (21.75.600 ಚ.ಕಿಮೀ.) ಗ್ರೀನ್ಲೆಂಡಿನ ಮಧ್ಯಭಾಗದ ಮೇಲೆ 7.000` ದಪ್ಪದ ಬರ್ಫದ ಹೊದಿಕೆ ಇದೆ. ಕರಾವಳಿ ಮಾತ್ರ ಬರ್ಫಾಚ್ಛಾದಿತವಾಗಿಲ್ಲ. ಈ ಪ್ರದೇಶ 50 ಮೈ.ಗಳಿಗಿಂತ ಕಿರಿದಾಗಿದೆ. ನೀರ್ಗಲ್ಲು ಕವಿಯದ ಪ್ರದೇಶದ ದೊಟ್ಟು ವಿಸ್ತೀರ್ಣ 1.14.600ಚ.ಮೈ. (2.96.900ಚ.ಕಿಮೀ.) ಮಾತ್ರ. ತೀರದಲ್ಲಿರುವ ದ್ವೀಪಗಳ ವಿಸ್ತೀರ್ಣ 17.300 ಚ.ಮೈ. (44.800ಚ.ಕಿಮೀ.)ಗ್ರೀನ್ಲೆಂಡಿನ ಜನಸಂಖ್ಯೆ 46.331 (1970)
ಭೌತ ಲಕ್ಷಣ: ಗ್ರೀನ್ಲೆಂಡ್ ಆರ್ಕೀಯನ್ ಯುಗದ ಬಂಡೆಗಳಿಂದ ಕೂಡಿದೆ. ಈವಿಗ್ಪೂಟ್ ಬಳಿ ಶೈವಲ ಶಿಲಾಸ್ತರಗಳುಂಟು. ಈ ಪ್ರಾಚೀನ ಸ್ತರಗಳ ಮೇಲೆ ತೃತೀಯ ಭೂಯುಗದ ಸುಣ್ಣಗಲ್ಲು ಪದರಗಳಿವೆ. ತೃತೀಯ ಭೂಯುಗದ ಕಾಲದಲ್ಲಿ ಜೀವಂತಗ್ನಿಪರ್ವತಳಿದ್ದುವೆಂಬುದು ಈ ದ್ವೀಪದಲ್ಲಿ 5,000` ದಪ್ಪಕ್ಕೆ ಹರಡಿರುವ ಅಗ್ನಿಶಿಲಾ ಪದರಗಳಿಂದ ವ್ಯಕ್ತವಾಗುತ್ತದೆ. ಹಿಂದೆ ತೃತೀಯ ಭೂಯುಗದಲ್ಲಿ ಉಷ್ಣತರ ವಾಯುಗುಣ ಇದ್ದು ಸಸ್ಯಗಳ ಬೆಳೆವಣಿಗೆಗೆ ಅನುಕೂಲವಾಗಿತ್ತೆಂಬುದನ್ನು ಭೂಮಿಯಲ್ಲಿ ಹುದುಗಿರುವ ಕಲ್ಲಿದ್ದಲು ಮತ್ತು ಜೇಡಿಪದರಗಲ್ಲು ಸೂಚಿಸುತ್ತದೆ. ಬಿಸಿನೀರಿನ ಊಟೆಗಳು ಯೂನರ್ಟೋಕ್, ಲಿವರ್ಪೂಲ್ ದ್ವೀಪ, ಡಿಸ್ಕೋ ದ್ವೀಪ, ಮೆಲ್ಲೆಮ್ಸ್ ಕೊಲ್ಲಿ ಮತ್ತು ಟರ್ನರ್‍ಲೆಂಡ್‍ಗಳಲ್ಲಿವೆ. ಇಲ್ಲಿಯ ಬರ್ಫ ನದಿಗಳ ಪೈಕಿ ಹಂಬೋಲ್ಟಿನ ಅಗಲ 60 ಮೈ. ಇದು ಉತ್ತರತೀರಕ್ಕೆ ಸಾಗುತ್ತದೆ.

ಗ್ರೀನ್ಲೆಂಡಿನ ಉತ್ತರ ಮತ್ತು ನಡುಭಾಗ ಬರ್ಫಾಚ್ಛಾದಿತವಾಗಿದ್ದು, ಪಶ್ಚಿಮ, ಪೂರ್ವ ಮತ್ತು ದಕ್ಷಿಣ ತೀರಗಳು ಮಾತ್ರ ಜನಜೀವನಕ್ಕೆ ಯೋಗ್ಯವಾಗಿವೆ. ಪಶ್ಚಿಮ ಭಾಗದಲ್ಲಿ ಪರ್ವತ ಶಿಖರಗಳು 5,000` ಎತ್ತರಕ್ಕಿವೆ. ಪೂರ್ವತೀರದ ಪರ್ವತಗಳು ಇನ್ನೂ ಎತ್ತರ. ಅವುಗಳಲ್ಲಿ ಗುನ್‍ಬ್ಜೊರಾಸ್ ಜೇಲ್ಡ್ ಶಿಖರ 12.140` ಎತ್ತರವಿದೆ. ಇದೇ ಗ್ರೀನ್ಲೆಂಡಿನ ಅತ್ಯುನ್ನತ ಶಿಖರ. ಗ್ರೀನ್ಲೆಂಡಿನಲ್ಲಿರುವ ಅನೇಕ ಕೊಲ್ಲಿಗಳ ಭಾಗದಲ್ಲಿ ಹಲವು ಯುಗಗಳಿಂದ ಭೂಸವೆತ ನಡೆದಿರಬೇಕು. ಅನೇಕ ನದಿಗಳು ಈ ಕೊರಕಲುಗಳ ಮೂಲಕ ವೇಗವಾಗಿ ಹರಿದು ಸಮುದ್ರ ಸೇರುತ್ತವೆ. 

ಗ್ರೀನ್ಲೆಂಡಿಗೆ 25.000 ಮೈ. ಉದ್ದದ ಕಡಲಂಚಿದೆ. ಇದು ಅಂಕುಡೊಂಕು. ಈಶಾನ್ಯ ತೀರ ಅಷ್ಟು ಅಂಕುಡೋಕಾಗಿಲ್ಲ. ತೀರಭಾಗಗಳಲ್ಲಿ ಅನೇಕ ಕಿರುದ್ವೀಪಗಳಿವೆ. ಅವುಗಳಲ್ಲಿ ಅತ್ಯಂತ ದೊಡ್ಡದು ಡಿಸ್ಕೋ (3,200 ಚ.ಮೈ.)
ವಾಯುಗುಣ: ಗ್ರೀನ್ಲೆಂಡಿನ ಆರ್ಕ್‍ಟಿಕ್ ವಾಯುಗುಣ. ಹವ ಅತ್ಯಂತ ಅನಿಶ್ಚಿತ. ಬಿಸಿಲು ಥಟ್ಟನೆ ಹರಿದು ರಭಸದ ಹಿಮಗಾಳಿ ಬೀಸಬಹುದು. ಇದರ ಮಧ್ಯಕ ಉಷ್ಣತೆ ಫೆಬ್ರುವರಿಯಲ್ಲಿ -52.90 ಫ್ಯಾ. ಜುಲೈಯಲ್ಲಿ 12.80 ಫ್ಯಾ. ಹಿಮಗಾಲದಲ್ಲಿ ಕನಿಷ್ಠ ಉಷ್ಣತೆ- 850 ಫ್ಯಾ. ಗರಿಷ್ಠ ಉಷ್ಣತೆ 26.60 ಫ್ಯಾ. ಬರ್ಫ ಕವಿದಿರುವ ಪ್ರದೇಶಗಳಲ್ಲಿ ಸರಾಸರಿ 8``-10`` ಅವಪಾತ; ದಕ್ಷಿಣದಲ್ಲಿ ಸರಾಸರಿ 40``. 

ಗ್ರೀನ್ಲೆಂಡಿನ ವಿವಿಧ ವಸತಿಗಳ ಸನ್ನಿವೇಶ ಮತ್ತು ಸರಾಸರಿ ಉಷ್ಣತೆಗಳು ಹೀಗಿವೆ.:
ವಸತಿ
ಸನ್ನಿವೇಶ
ಉಷ್ಣತೆ

ಬೇಸಿಗೆಯಲ್ಲಿ
ಚಳಿಗಾಲದಲ್ಲಿ

ಈವಿಗ್ಬೂಟ್ 
ಗಾಡ್ತಾಪ್
ಊಪರ್ನವೀಕ್
ಥ್ಯಾಂಕ್‍ಗಾಡ್ ರೇವು 
ಉ.ಅ. 610
ಉ.ಅ. 640
ಉ.ಅ. 730
ಉ.ಅ. 820
480 ಫ್ಯಾ. 
390 ಫ್ಯಾ. 
380 ಫ್ಯಾ. 
350 ಫ್ಯಾ. 
210 ಫ್ಯಾ. 
120 ಫ್ಯಾ. 
40 ಫ್ಯಾ. 
370 ಫ್ಯಾ.

ಡಿಸ್ಕೋ ಕೊಲ್ಲಿಯ ಬಳಿ ಚಳಿಗಾಲದಲ್ಲಿ ಏಳು ವಾರಗಳ ಕಾಲ ಸೂರ್ಯೋದಯವಿಲ್ಲ; ದ್ವೀಪದ ಉತ್ತರದ ತುದಿಯಲ್ಲಿ ಐದು ತಿಂಗಳುಗಳ ಕಾಲ ಸೂರ್ಯ ಕಾಣಿಸುವುದಿಲ್ಲ. ಬೇಸಗೆಯಲ್ಲಿ ಈ ಎರಡು ಸ್ಥಳಗಳಲ್ಲೂ ಮೇಲೆ ಸೂಚಿತವಾದ ಅವಧಿಯಲ್ಲಿ ಮಧ್ಯರಾತ್ರಿಯ ಸೂರ್ಯ ಕಾಣಿಸುತ್ತದೆ.

ನೈಸರ್ಗಿಕ ಸಸ್ಯ, ಪ್ರಾಣಿಗಳು : ಗ್ರೀನ್ಲೆಂಡಿನ ಬಹುಭಾಗ ಸಸ್ಯಗಳು ಬೆಳೆಯುವ ಪ್ರದೇಶಕ್ಕೆ ಉತ್ತರದಲ್ಲಿದೆ. ನೈಋತ್ಯ ಭಾಗದಲ್ಲಿ ಸಸ್ಯಗಳಿವೆ. ತೀರ ಪ್ರದೇಶದಲ್ಲಿ ವಿಲೊ ಮತ್ತು ಬರ್ಚ್ 10 ಎತ್ತರಕ್ಕೆ ಬೆಳೆಯುತ್ತವೆ; ಒಳನಾಡಿನಲ್ಲಿ ಆಲ್ಡರ್ ಮರಗಳು ಗಿಡ್ಡಾಗಿ ಬೆಳೆದುಕೊಂಡಿವೆ. ಕೆಲವು ಸಮತಲ ಭೂಭಾಗಗಳಲ್ಲಿ ಬೆಂಗಾಡಿನ ಸಸ್ಯಗಳುಂಟು. ಬೆಟ್ಟ ಪ್ರದೇಶಗಳಲ್ಲಿ ಮಾಸ್, ಐಸ್ಲೆಂಡ್ ಪಾಪಿ ಗಿಡಗಳು ಹೆಚ್ಚು. ಗೇಕು (ಸೆಜ್) ಮತ್ತು ಕುರುಚಲು ಗಿಡಗಳು ಪಾಚಿ ಕಟ್ಟಿದ ಬಂಡೆಗಳ ನಡುವೆ ಬೆಳೆಯುತ್ತವೆ. ಕೆಂಪು ಮೂಲಂಗಿ, ಟರ್ನಿಪ್ ಮತ್ತು ಲೆಟ್ಯೂಸ್ ಇವು ಇಲ್ಲಿ ಬೆಳೆಯುವ ತರಕಾರಿಗಳು.

ಈ ದ್ವೀಪದ ಮುಖ್ಯ ಪ್ರಾಣಿಗಳು ಕಸ್ತೂರಿ ದನ, ಲೆಮಿಂಗ್, ಎರ್ಮಿನ್, ಹಿಮಸಾರಂಗ, ಆರ್ಕ್‍ಟಿಕ್ ತೋಳ, ಕರಡಿ, ನರಿ ಮತ್ತು ಮೊಲ. ಸಮುದ್ರದಲ್ಲಿ ತಿಮಿಂಗಿಲ ಮತ್ತು ಸೀಲ್ ಪ್ರಾಣಿಗಳಿವೆ. ಡೇಗೆ, ಹದ್ದು, ವಿವಿಧ ಬಗೆಯ ಕಡಲ ಹಕ್ಕಿಗಳು, ಕೆಂಪು ಪಾದದ ಬಾತುಗಳು ಹೇರಳ. ದಕ್ಷಿಣ ತೀರಗಳಲ್ಲಿ ಕುರಿ ಮತ್ತು ದನಗಳನ್ನು ಸಾಕುತ್ತಾರೆ. ನಾಯಿಗಳನ್ನು ಬೇಟೆಗೂ ಸ್ಲೆಜ್ ಎಳೆಯಲ್ಲೂ ಉಪಯೋಗಿಸುತ್ತಾರೆ.

ಇತಿಹಾಸ : ಗ್ರೀನ್ಲೆಂಡಿನ ಇತಿಹಾಸ ಉತ್ತರ ಮೇರು ಪ್ರದೇಶದ ಪರಿಶೋಧನೆಯ ಇತಿಹಾಸದೊಂದಿಗೆ ಬೆರೆತುಕೊಂಡಿದೆ. ಐಸ್ಲೆಂಡಿನ ಗನ್ಬ್‍ಯಾರ್ನ್ ಎಂಬಾತ 877ರಲ್ಲಿ ಗ್ರೀನ್ಲೆಂಡಿನ ಪಶ್ಚಿಮತೀರದ ದ್ವೀಪಗಳನ್ನು ಕಂಡುಹಿಡಿದ. 982ರಲ್ಲಿ ಎರಿಕ್ ದಿ ರೆಡ್ ಎಂಬ ಪರಿಶೋಧಕ ಗ್ರೀನ್ಲೆಂಡಿನ ಪಶ್ಚಿಮತೀರದಲ್ಲಿ 3 ವರ್ಷಗಳಿದ್ದು ಹಿಂದಿರುಗಿ, ತಾನು ಕಂಡುಹಿಡಿದ ಭೂಭಾಗ ನೆಲೆಸಲು ಯೋಗ್ಯವೆಂದು ತನ್ನ ಜನರಿಗೆ ಭರವಸೆ ನೀಡಿದ. ಅದಕ್ಕೆ ಗ್ರೀನ್ಲೆಂಡ ಎಂದು ನಾಮಕರಣವಾಯಿತು. 986ರಲ್ಲಿ ಜನ ಅಲ್ಲಿ ನೆಲೆಸಿದರು. 15ನೆಯ ಶತಮಾನದಲ್ಲಿ ಅಲ್ಲಿಯ ಜನರಿಗೆ ಹೊರಗಿನ ಸಂಪರ್ಕ ಕಡಿದುಹೋಯಿತು. 1578ರಲ್ಲಿ ಇಂಗ್ಲೆಂಡಿನ ನಾವಿಕ ಮಾರ್ಟಿನ್ ಪ್ರೊಬಿಷರ್ ಈ ದ್ವೀಪವನ್ನು ಮತ್ತೆ ಕಂಡುಹಿಡಿದ. ತರುವಾಯ ಇದನ್ನು ಮುಟ್ಟಿದವರು ಜಾನ್ ಡೇವಿಸ್ (1586-88), ಹೆನ್ರಿ ಹಡ್ಸನ್ (1610), ವಿಲಿಯಂ ಬ್ಯಾಫಿನ್ (1616), ಡೆನ್ಮಾರ್ಕಿನ ಜೊರಿಸ್ ಕಾರೊಲಸ್ ಮೊದಲಾದವರು. 17ನೆಯ ಶತಮಾನದಲ್ಲಿ ತಿಮಿಂಗಲ ಬೇಟೆಗೆ ಅನೇಕ ನಾವಿಕರು ಇಲ್ಲಿಗೆ ಬರುತ್ತಿದ್ದರು.
ತೀರಭಾಗದಲ್ಲಿ ಶಿಬಿರಗಳನ್ನು ಸ್ಥಾಪಿಸಿಕೊಳ್ಳದೆ ಗ್ರೀನ್ಲೆಂಡಿನ ಒಳನಾಡಿನ ಪರಿಶೋಧನೆ ನಡೆಸಲು ಸಾಧ್ಯವಾಗಿರಲಿಲ್ಲ. 1721ರಲ್ಲಿ ಡೆನ್ಮಾರ್ಕ್ ಮತ್ತು ನಾರ್ವೇ ದೇಶಗಳ ಹ್ಯಾನ್ಯ್ ಇಗೇಡ್ ಪಶ್ಚಿಮ ಕರಾವಳಿಯ ಗಾಡ್ತಾಪ್ ಬಳಿ ವಸತಿ ಸ್ಥಾಪಿಸಿ ಅಲ್ಲಿಯ ಜನಜೀವನವನ್ನು ಅಧ್ಯಯನಮಾಡಿದ. 19ನೆಯ ಶತಮಾನದಲ್ಲಿ ಗ್ರೀನ್ಲೆಂಡಿನ ಪರಿಶೋಧನೆ ಭರದಿಂದ ಸಾಗಿತು. 1818ರಲ್ಲಿ ಯಾರ್ಕ್ ಭೂಶಿರದ ಬಳಿ ಆರ್ಕ್‍ಟಿಕ್ ಎಸ್ಕಿಮೋ ಜನರನ್ನು ಕಂಡು ಪಶ್ಚಿಮ ತೀರದ ಬಗ್ಗೆ ನಿಖರವಾದ ಮಾಹಿತಿ ಒದಗಿಸಿದವನು ಡಬ್ಲ್ಯು. ಸ್ಕೊರೆಸ್ಬಿ. ರೈಡರ್ ಎಂಬಾತ ಫೇರ್ವೆಲ್ ಭೂಶಿರದ ಭಾಗದ ಭೂಪಟ ರಚಿಸಿದ (1891-1892). 19ನೆಯ ಶತಮಾನದ ಕೊನೆಯ ವೇಳೆಗೆ ಉತ್ತರ ಗ್ರೀನ್ಲೆಂಡಿಗೆ ಹಲವಾರು ಪರಿಶೋಧಕರು ಹೋದರು. 1924-1934ರಲ್ಲಿ ರಾಸ್ಮುಸೆನ್, ಕಾಕ್ ಮತ್ತು ಮಿಕ್ಕೆಲ್ಸೆನ್ ಎಂಬ ಡೆನ್ಮಾರ್ಕ್ ದೇಶೀಯರು ಪಶ್ಚಿಮ ಕರಾವಳಿಯ ಪರಿಶೋಧನೆಗಳನ್ನು ಮುಂದುವರಿಸಿದರು. ಎರಡನೆಯ ಮಹಾಯುದ್ಧದ ತರುವಾಯ ಗ್ರೀನ್ಲೆಂಡಿನ ವಿಶಾಲ ಪ್ರದೇಶಗಳ ಭೂಪಟವನ್ನು ವಿಮಾನಗಳ ನೆರವಿನಿಂದ ತಯಾರಿಸಿಕೊಳ್ಳಲಾಗಿದೆ.

ಗ್ರೀನ್ಲೆಂಡಿನ ಒಳನಾಡಿನ ಬರ್ಫಾವೃತ ಪ್ರದೇಶದ ಪರಿಶೋಧನೆಯ ಪ್ರಯತ್ನ 18ನೆಯ ಶತಮಾನದಲ್ಲಿ ನಡೆದು ವಿಫಲವಾಯಿತು. ಜೆನ್ಸನ್ 1878ರಲ್ಲಿ ಪಶ್ಚಿಮ ತೀರದಿಂದ 45 ಮೈ. ದೂರದಲ್ಲಿ ಉ.ಅ. 620 50ನಲ್ಲಿರುವ ಜೆನ್ಸನ್ ನೂನಟಕ್ಸ್ ಎಂಬ ಸ್ಥಳವನ್ನು ಮುಟ್ಟಿದ. ನಾರ್ವೇ ದೇಶದ ಫ್ರಿಡ್ಜಾಫ್ ನಾನ್ಸೆಸ್ ಐವರು ಪರಿಶೋಧಕರೊಡನೆ ಉ.ಅ. 450 25ನಲ್ಲಿ ಸಂಚಾರವನ್ನಾರಂಭಿಸಿ ಒಳನಾಡ ಬರ್ಫಾವೃತ ಪ್ರದೇಶವನ್ನು ಪೂರ್ವದಿಂದ ಪಶ್ಚಿಮಕ್ಕೆ ದಾಟಿದ (1888). ಪೀರಿ ಮತ್ತು ಇ. ಆಸ್ಟ್ರಫ್ 1892ರಲ್ಲಿ ಒಳನಾಡನ್ನು ಉ.ಅ. 780 ಮತ್ತು 820 ನಡುವೆ ದಾಟಿ ಬರ್ಫ ಹೊದಿಕೆಯ ಉತ್ತರದ ತುದಿಯನ್ನು ನಿರ್ಧರಿಸಿದರು.

ಉತ್ತರ ಅಟ್ಲಾಂಟಿಕ್ ಸಾಗರದ ಹಾಗೂ ಪಶ್ಚಿಮ ಯೂರೋಪ್ ಭಾಗದ ವಾಯುಗುಣ ಪರಿಸ್ಥಿತಿಗಳ ಮುನ್‍ಸೂಚನೆ ಗ್ರೀನ್ಲೆಂಡಿನ ಹವವನ್ನರಿಯುವುದರಿಂದ ಸುಲಭವಾಗುವುದರಿಂದ ಅಲ್ಲಿ 1930ರಿಂದ ಹವ ಸಮೀಕ್ಷೆಗಳನ್ನು ನಡೆಸಲಾಗುತ್ತಿದೆ. ಬ್ರಿಟಿಷ್ ಪರಿಶೋಧಕ ತಂಡವೊಂದು ಉತ್ತರ ಮೇರುವೃತ್ತಕ್ಕೆ 40 ಮೈ. ದೂರದಲ್ಲಿ ಒಳನಾಡಿನ ಬರ್ಫದ ಗಡ್ಡೆಯ ಪ್ರದೇಶದಲ್ಲಿ ಸಮೀಕ್ಷೆಗಳನ್ನು ನಡೆಸಿತು. ಎರಡನೆಯ ಮಹಾಯುದ್ಧದ ಕಾಲದಲ್ಲಿ ಮಿತ್ರರಾಷ್ಟ್ರಗಳ ಸೇನಾ ಹವ ಸಮೀಕ್ಷಾ ಕೇಂದ್ರಗಳನ್ನು ಗ್ರೀನ್ಲೆಂಡಿನ ದಕ್ಷಿಣದ ತುದಿಯಿಂದ ಉತ್ತರದ ತುದಿಯ ವರೆಗೂ ಅಲ್ಲಲ್ಲಿ ಸ್ಥಾಪಿಸಲಾಯಿತು. 1951ರಲ್ಲಿ ಭೂವಿಜ್ಞಾನ ಸಂಶೋಧನ ಸಂಸ್ಥೆಯೊಂದು ಗ್ರೀನ್ಲೆಂಡಿನಲ್ಲಿ ಸ್ಥಿರವಾಗಿ ಸ್ಥಾಪಿತವಾಯಿತು.

ಎರಿಕ್ ದಿ ರೆಡ್ ಪರಿಶೋಧಕ ಕಾಲದಿಂದ (982) ಗ್ರೀನ್ಲೆಂಡಿನಲ್ಲಿ ಜನವಸತಿಗಳನ್ನು ಸ್ಥಾಪಿಸಲು ಪ್ರಯತ್ನ ನಡೆದಿದೆಯಾದರೂ 1410ರ ಹೊತ್ತಿಗೆ ಇದರೊಂದಿಗೆ ಜನಸಂಪರ್ಕ ಕಡಿದುಹೋಯಿತು. 16 ಮತ್ತು 17ನೆಯ ಶತಮಾನಗಳಲ್ಲಿ ಈ ದ್ವೀಪದೊಡನೆ ಸಂಬಂಧ ಹೊಂದಲು ಡೆನ್ಮಾರ್ಕ್ ಕ್ರಮ ಕೈಗೊಂಡಿತು. 1814ರಲ್ಲಿ ನಾರ್ವೇ ಮತ್ತು ಡೆನ್ಮಾರ್ಕ್ ದೇಶಗಳು ಪ್ರತ್ಯೇಕಗೊಂಡಾಗ ಗ್ರೀನ್ಲೆಂಡ್ ವಸಾಹತು ಪ್ರದೇಶಗಳು ಡೆನ್ಮಾರ್ಕಿಗೆ ಸೇರಿದುವು. 1916ರಲ್ಲಿ ಅಮೆರಿಕ ಆ ದ್ವೀಪದ ಮೇಲೆ ಡೆನ್ಮಾರ್ಕಿನ ರಾಜಕೀಯ ಮತ್ತು ಆರ್ಥಿಕ ಹಕ್ಕನ್ನು ಅಂಗೀಕರಿಸಿತು. ಎರಡನೆಯ ಮಹಾಯುದ್ಧದ ಕಾಲದಲ್ಲಿ ಡೆನ್ಮಾರ್ಕ್ ಜರ್ಮನಿಗೆ ವಶವಾಗಿತ್ತು 1951ರಲ್ಲಿ ಗ್ರೀನ್ಲೆಂಡಿನ ರಕ್ಷಣೆಯ ಬಗ್ಗೆ ಅಮೆರಿಕ ಡೆನ್ಮಾರ್ಕ್ ಒಪ್ಪಂದ ಏರ್ಪಟ್ಟಿತು. 1953ರಲ್ಲಿ ಗ್ರೀನ್ಲೆಂಡ್ ಡೆನ್‍ಮಾರ್ಕಿನಲ್ಲಿ ವಿಲೀನಗೊಂಡಿತು.

ಆಡಳಿತ : ಗ್ರೀನ್ಲೆಂಡಿನ ಜನ ಡೆನ್ಮಾರ್ಕ್ ಪ್ರಜೆಗಳ ಸ್ಥಾನಮಾನ ಹೊಂದಿದ್ದಾರೆ. ಗ್ರೀನ್ಲೆಂಡನ್ನು ಎರಡು ಚುನಾವಣಾ ಕ್ಷೇತ್ರಗಳಾಗಿ ವಿಂಗಡಿಸಲಾಗಿದೆ. ಡೆನ್ಮಾರ್ಕಿನ ಸಂಸತ್ತಿಗೆ ಇಲ್ಲಿಂದ ಇಬ್ಬರು ಸದಸ್ಯರು ಚುನಾಯಿತರಾಗುತ್ತಾರೆ. ಇಲ್ಲಿಯ ಆಡಳಿತನಿರ್ವಹಣೆಗಾಗಿ ಡೆನ್ಮಾರ್ಕಿನಿಂದ ಒಬ್ಬ ರಾಜ್ಯಪಾಲ ನೇಮಕವಾಗಿದ್ದಾನೆ.

ಆಡಳಿತ ದೃಷ್ಟಿಯಿಂದ ಗ್ರೀನ್ಲೆಂಡ್ ಪಶ್ಚಿಮ, ಪೂರ್ವ ಮತ್ತು ಉತ್ತರ ವಿಭಾಗಗಳಾಗಿ ವಿಂಗಡಣೆಯಾಗಿದೆ. ಇದರ ರಾಜಧಾನಿಯಾದ ಗಾಡ್ತಾಪ್ ನಗರದಲ್ಲಿ ಸ್ಥಳೀಯ ಆಡಳಿತಕ್ಕಾಗಿ 17 ಮಂದಿ ಸದಸ್ಯರಿಂದ ಕೂಡಿದ ಲ್ಯಾಂಡ್‍ಸ್ರಾಡ್ ಎಂಬ ಸಭೆ ಇದೆ. ಕೋಪನ್‍ಹೇಗನ್‍ನಲ್ಲಿರುವ ಡೆನ್ಮಾರ್ಕ್ ಸಂಸತ್ತಿನ ಮುಂದೆ ಮಂಡಿಸುವ ವಿಧೇಯಕಗಳನ್ನು ಮೊದಲು ಲ್ಯಾಂಡ್‍ಸ್ರಾಡ್ ಸಭೆ ಅಂಗೀಕರಿಸಬೇಕು.

ನ್ಯಾಯಾಡಳಿತಕ್ಕಾಗಿ ಗ್ರೀನ್ಲೆಂಡ್ 16 ಜಿಲ್ಲೆಗಳಾಗಿ ವಿಭಾಗವಾಗಿದೆ. ಕೋಪನ್ ಹೇಗನ್‍ನ ಉಚ್ಚ ನ್ಯಾಯಾಲಯವೇ ಇದಕ್ಕೂ ಉಚ್ಚ ನ್ಯಾಯಾಲಯ.

ಜನಜೀವನ : 8ನೆಯ ಶತಮಾನದಲ್ಲಿ ಕೆನಡದ ಉತ್ತರ ದ್ವೀಪಸ್ತೋಮಗಳಿಂದ ಎಸ್ಕಿಮೋ ಜನ ಗ್ರೀನ್ಲೆಂಡಿಗೆ ಬಂದು ನೆಲಸಿದ್ದರು. ನಾರ್ವೇ ಜನ ವಸತಿಗಳನ್ನು ಸ್ಥಾಪಿಸಿಕೊಂಡ ಕಾಲದಲ್ಲಿ ಇವರು ಪೂರ್ವ ತೀರದತ್ತ ಸಾಗಿ ಅಲ್ಲಿ ನೆಲಸಿದರು. ತರುವಾಯ ಫೇರ್ವೆಲ್ ಭೂಶಿರವನ್ನು ಸುತ್ತಿಕೊಂಡು ಪಶ್ಚಿಮ ತೀರಕ್ಕೆ ಬಂದರು. ಈ ದ್ವೀಪದ ಜನರೆಲ್ಲ ಬಹುಮಟ್ಟಿಗೆ ಯೂರೋಪಿನ ಜನರೊಡನೆ ಮಿಶ್ರಗೊಂಡ ಎಸ್ಕಿಮೋ ಜನ. ಅವರನ್ನು ಗ್ರೀನ್ಲೆಂಡರ್ಸ್ ಎಂದು ಕರೆಯುತ್ತಾರೆ. ಅತ್ಯಂತ ಉತ್ತರದಲ್ಲಿ ಶುದ್ಧ ಎಸ್ಕಿಮೋ ಜನರನ್ನು ಕಾಣಬಹುದು. ಗ್ರೀನ್ಲೆಂಡಿನ ಜನಸಂಖ್ಯೆ 46,331 (1970). ಜನ ಡೇನಿಷ್ ಮತ್ತು ಗ್ರೀನ್ಲೆಂಡಿಕ್ ಭಾಷೆಗಳನ್ನಾಡುತ್ತಾರೆ.

1000ದಲ್ಲಿ ಕ್ರೈಸ್ತಮತ ಗ್ರೀನ್ಲೆಂಡಿನಲ್ಲಿ ಹರಡಿತು. ಕೋಪನ್‍ಹೇಗನ್ ನಗರದ ಬಿಷಪ್‍ನ ಧರ್ಮಾಧಿಕಾರ ವ್ಯಾಪ್ತಿಗೆ ಈ ದ್ವೀಪ ಸೇರಿದೆ.

ಗ್ರೀನ್ಲೆಂಡಿನ ಎಲ್ಲ ವಸತಿಗಳಲ್ಲೂ ಶಾಲೆಗಳಿವೆ. ಶಿಕ್ಷಣ ಮಾಧ್ಯಮ ಗ್ರೀನ್ಲೆಂಡಿಕ್ ಭಾಷೆ. ಕೆಲವು ಪ್ರೌಢ ಶಿಕ್ಷಣ ಶಾಲೆಗಳೂ ವಾಣಿಜ್ಯ ಶಿಕ್ಷಣ ಶಾಲೆಗಳೂ ಇವೆ. ವಿಶೇಷ ಶಿಕ್ಷಣಕ್ಕೆ ವಿದ್ಯಾರ್ಥಿಗಳು ಡೆನ್ಮಾರ್ಕಿಗೆ ಹೋಗುತ್ತಾರೆ.
ಆರ್ಥಿಕತೆ : ಗ್ರೀನ್ಲೆಂಡ್ ವ್ಯವಸಾಯಕ್ಕೆ ಯೋಗ್ಯವಾಗಿಲ್ಲ. ಒಂದೆ ಸೀಲ್ ಪ್ರಾಣಿಗಳ ಬೇಟೆ ಹೆಚ್ಚಾಗಿ ನಡೆಯುತ್ತಿತ್ತು. ಇತ್ತೀಚೆಗೆ ಮೀನುಗಾರಿಕೆ ಇಲ್ಲಿಯ ಮುಖ್ಯ ವೃತ್ತಿ. ಇಲ್ಲಿಂದ ಕಾಡ್, ಹ್ಯಾಲಿಬಟ್ ಮೀನುಗಳ ಎಣ್ಣೆ ಹಾಗೂ ವಿವಿಧ ಬಗೆಯ ಮೀನುಗಳು ರಫ್ತಾಗುತ್ತವೆ. ಕ್ರಿಯೊಲೈಟ್ ಲೋಹ ಈವಿಗ್ಟೂಟ್ ನಗರದ ಬಳಿಯೂ ಕಲ್ಲಿದ್ದಿಲು ಕೂಡ್ಲಿಗ್ ಸಾಟ್ ಬಳಿಯೂ ಸಿಗುತ್ತವೆ. ಪೂರ್ವಭಾಗದಲ್ಲಿ ಸೀಸದ ಗಣಿಗಳಿವೆ.

ಗ್ರೀನ್ಲೆಂಡಿನ ಮುಖ್ಯ ಬಂದರು ಗಾಟ್ತಾಪ್. ಫೇರಿಂಗ್‍ಹೇವನ್, ಫ್ರೆಡ್ರಿಕ್ಷಾಬ್ ಮತ್ತು ಸುಕ್ಕೆರ್ಟಾಪೆನ್-ಇವು ವರ್ಷವಿಡೀ ತೆರೆದ ರೇವುಗಳು. ಗ್ರೀನ್ಲೆಂಡಿನ ವಾಯವ್ಯದಲ್ಲಿರುವ ತ್ಯೂಲಿಯಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನಗಳಿಗೆ ಸೇರಿದ ನೌಕಾ ಕೇಂದ್ರವುಂಟು. ಡೆನ್ಮಾರ್ಕ್ ಆಡಳಿತಕ್ಕೊಳಪಟ್ಟ ಅಂತರ ರಾಷ್ಟ್ರೀಯ ಹವಾ ವೀಕ್ಷಣಾ ಕೇಂದ್ರ ಅಟ್ಲಾಂಟಿಕ್ ಸಾಗರದ ಮೇಲೆ ವಿಮಾನ ಸಂಚಾರಕ್ಕೆ ಸಹಾಯಕವಾಗಿವೆ. ಗ್ರೀನ್ಲೆಂಡಿನ ಪ್ರಕೃತಿಯ ಅದ್ಭುತ ದೃಶ್ಯಗಳನ್ನು ಕಾಣಲು ಪ್ರವಾಸಿಗಳು ಇಲ್ಲಿಗೆ ಬರುತ್ತಾರೆ.
(ವಿ.ಜಿ.ಕೆ.;ಜೆ.ಇ.ಸಿ.)
(ಆರ್.ಆರ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ